ಸಕಲೇಶಪುರ: ಸಮಾಜದಿಂದ ಡ್ರಗ್ಸ್ ನಿರ್ಮೂಲನೆ ಮಾಡುವುದು ಪ್ರತಿ ನಾಗರಿಕನ ಮೂಲ ಕರ್ತವ್ಯವಾಗಿದೆ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹೇಳಿದ್ದಾರೆ.ಆಗಸ್ಟ್ 21ರಂದು ನಡೆಯಲಿರುವ ಡ್ರಗ್ಸ್ ಮುಕ್ತ ಸಕಲೇಶಪುರ ಸಮಾವೇಶದ ಪೂರ್ವಭಾವಿಯಾಗಿ,ಪಟ್ಟಣದ ಜೇನು ಪೋಷಕರ ಸಹಕಾರ ಸಂಘದ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಎಂಬ ದುಷ್ಪ್ರವೃತ್ತಿ ಯುವ ಪೀಳಿಗೆಯ ಭವಿಷ್ಯವನ್ನು ನಾಶಮಾಡುವುದಲ್ಲದೆ, ಕುಟುಂಬ ಮತ್ತು ಸಮಾಜದ ಸ್ಥೈರ್ಯಕ್ಕೂ ಧಕ್ಕೆ ತರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಮಾದಕ ವಸ್ತುಗಳ ಹರಡುವಿಕೆಯನ್ನು ತಡೆಯುವುದು ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯೂ ಆಗಿದೆ ಎಂದು ಅವರು ಹಿತವಚನ ನೀಡಿ ಡ್ರಗ್ಸ್ ವಿರುದ್ಧ ಹೋರಾಟ ಮನೆಮಠಗಳಿಂದಲೇ ಆರಂಭವಾಗಬೇಕು ಎಂದು ಹೇಳಿದರು. ಪೋಷಕರು ತಮ್ಮ ಮಕ್ಕಳಲ್ಲಿ ಬರುವ ಬದಲಾವಣೆಗಳನ್ನು ಗಮನಿಸಿ, ತಪ್ಪು ಮಾರ್ಗಕ್ಕೆ ಸಾಗುವ ಮೊದಲು ಸಮಾಲೋಚನೆ ಮಾಡಬೇಕು. ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಅಪಾಯಗಳನ್ನು ತಿಳಿಸುವುದು ಅಗತ್ಯವೆಂದರು. ಸಾಮಾಜಿಕ ಸಂಘಟನೆಗಳು, ಯುವ ಸಂಘಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಈ ಹೋರಾಟದಲ್ಲಿ ಕೈ ಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಆಂದೋಲನದ ಸಂಚಾಲಕ ಮಲ್ನಾಡ್ ಮೆಹಬೂಬ್, ಡ್ರಗ್ಸ್‌ ವಿರುದ್ಧ ಹೋರಾಟಕ್ಕೆ ಕಾನೂನು ಕಠಿಣವಾಗಿರುವುದರಿಂದ, ಜನರು ಕಾನೂನು ಸಹಕಾರ ನೀಡಬೇಕು ಎಂದರು.ಅಕ್ರಮ ವಹಿವಾಟು, ಸೇವನೆ ಅಥವಾ ಸಂಗ್ರಹಣೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಜನರ ಸಹಕಾರವಿಲ್ಲದೆ ಯಾವುದೇ ಕಾನೂನು ಯಶಸ್ವಿಯಾಗುವುದಿಲ್ಲವೆಂದು ಅವರು ಅಭಿಪ್ರಾಯಪಟ್ಟರು.ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶಮೂರ್ತಿ ಮಾತನಾಡಿ ಸಮಾಜದಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ಬೆಳೆಸುವುದು ಡ್ರಗ್ಸ್ ವಿರುದ್ಧದ ಶ್ರೇಷ್ಠ ಆಯುಧ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಪುಸ್ತಕ ಓದು, ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರನ್ನು ಡ್ರಗ್ಸ್‌ನಿಂದ ದೂರವಿಡಬಹುದು ಎಂದರು.ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಜೈ ಮಾರುತಿ ದೇವರಾಜ್, ಶಾರದ ಗುರುಮೂರ್ತಿ, ಅರ್ಜನಾ ಜಯಂತ್, ರೋಟೋರಿಯನ್ ಚಂದ್ರಶೇಖರ್, ಲಯನ್ಸ್ ಮಂಜುನಾಥ್, ಸನಾತನ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಸಂಗೀ, ಬೆಕ್ಕನಹಳ್ಳಿ ನಾಗರಾಜ್, ಸೌಮ್ಯ, ಶಾಂತರಾಜ್ ಹೆನ್ನಲಿ , ಮುಂತಾದವರು ಇದ್ದರು

Leave comment

Your email address will not be published. Required fields are marked with *.